ಮಾವಿನ ಕಾಯಿ ಸೀಸನ್ ಬರ್ತಾ ಇದೆ, ಮನೆಯಲ್ಲಿಯೇ ಹೀಗೆ ಚಟ್ನಿ ಮಾಡಿ ನೋಡಿ. ರುಚಿಯಂತೂ ಅದ್ಭುತ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಮಾವಿನಕಾಯಿ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಮಾವಿನಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 1 ತೋತಾಪುರಿ ಮಾವಿನಕಾಯಿ, 3 ಚಮಚ ಸಾಸಿವೆ, ಅರ್ಧ ಚಮಚ ಮೆಂತ್ಯ, ಖಾರಕ್ಕೆ ಬೇಕಾಗುವಷ್ಟು ಅಚ್ಚಖಾರದ ಪುಡಿ, ಸ್ವಲ್ಪ ಅರಿಶಿಣ ಪುಡಿ, ಸ್ವಲ್ಪ ಬೆಳ್ಳುಳ್ಳಿ, 2 ದೊಡ್ಡ ಚಮಚ ಎಣ್ಣೆ, 5 – 6 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಇಂಗು, ರುಚಿಗೆ ತಕಷ್ಟು ಉಪ್ಪು, ಸ್ವಲ್ಪ ಬೆಲ್ಲ.

ಮಾವಿನಕಾಯಿ ಚಟ್ನಿ ಮಾಡುವ ವಿಧಾನ: ಮೊದಲಿಗೆ ಮಾವಿನಕಾಯಿಯನ್ನು ನೀರಿನಿಂದ ತೊಳೆದು ಒಂದು ಕಾಟನ್ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಮಾವಿನಕಾಯಿಯ ಸಿಪ್ಪೆಯನ್ನು ತೆಗೆದು ತುರಿದುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚ ಸಾಸಿವೆಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲೆಗೆ ಮೆಂತ್ಯವನ್ನು ಹಾಕಿ ಫ್ರೈ ಮಾಡಿಕೊಂಡು ಅದೇ ಪ್ಲೇಟಿಗೆ ಹಾಕಿ ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಸಾಸಿವೆ, ಮೆಂತ್ಯ, ಬೆಳ್ಳುಳ್ಳಿ, ಖಾರಕ್ಕೆ ಬೇಕಾಗುವಷ್ಟು ಅಚ್ಚಖಾರದ ಪುಡಿ,1 ಚಮಚ ಅರಿಶಿಣ ಪುಡಿ, ಮಾವಿನ ಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಬೆಲ್ಲವನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ 1 ಚಮಚ ಸಾಸಿವೆ, ಮುರಿದ ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವು, ಸ್ವಲ್ಪ ಇಂಗು, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ರುಬ್ಬಿದ ಮಿಶ್ರಣಕ್ಕೆ ಮಿಕ್ಸ್ ಮಾಡಿದರೆ ಮಾವಿನಕಾಯಿ ಚಟ್ನಿ ಸವಿಯಲು ಸಿದ್ದ.